ಮನುಷ್ಯನು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಯಕೃತ್ ಕೂಡ ಇಂತಹ ಅಂಗಗಳಲ್ಲಿ ಒಂದು. ಈ ಅಂಗ ದೇಹದ ಚಯಾಪಚಯ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು ಸಂಪೂರ್ಣ ಆರೋಗ್ಯವಾಗಿರಲು ಯಕೃತ್ ಆರೋಗ್ಯಕರವಾಗಿರಬೇಕು. ಇಲ್ಲದಿದ್ದಲ್ಲಿ ಮಾರಣಾಂತಿಕ ರೋಗಗಳಿಗೆ ಆಸ್ಪದವಾಗುವುದು.
• ಯಕೃತ್ತಿನ ಕಾರ್ಯಗಳೇನು?
ಯಕೃತ್ತಿನ ಪಾತ್ರ ಚಯಾಪಚಯ ಕ್ರಿಯೆ (ಪಿತ್ತರಸ ತಯಾರಿಕೆ ಮತ್ತು ವಿಸರ್ಜನೆ) ಯಲ್ಲಿ ಪ್ರಮುಖವಾಗಿದೆ ಹಾಗೂ ದೇಹದಲ್ಲಿ ಗ್ಲೈಕೋಜನ್ ಸಂಗ್ರಹಣೆ, ಕೆಂಪು ರಕ್ತಕಣಗಳ ವಿಭಜನೆ, ಪ್ಲಾಸ್ಮ ಪ್ರೋಟೀನ್ ಉತ್ಪಾದನೆ , ಹಾರ್ಮೋನ್ ಉತ್ಪಾದನೆ ಮತ್ತು ವಿಷದ (ದೇಹದ ಕಶ್ಮಲಗಳನ್ನು) ಅಂಶವನ್ನು ತೆಗೆದುಹಾಕುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತದೆ.
• ಹೆಪಟೈಟಿಸ್ / ಯಕೃತ್ತಿನ ಉರಿಯೂತ ಎಂದರೇನು?
ಹೆಪಟೈಟಿಸ್ ಅಥವಾ ಯಕೃತ್ತಿನ ಉರಿಯೂತ ಎಂಬುದು ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದ್ದು ಹಲವಾರು ಕಾರಣಗಳಿಂದ ಬರಬಹುದು.
ಮದ್ಯ ಸೇವನೆ, ಕಲುಷಿತ ರಕ್ತ ವರ್ಗಾವಣೆ, ಸಾಂಕ್ರಾಮಿಕ ರಕ್ತ ಅಥವಾ ದೇಹದ ದ್ರವಗಳಿಗೆ ಒಡ್ಡಿಕೊಳ್ಳುವುದರಿಂದ, ಜನನದ ಸಮಯದಲ್ಲಿ, ಹಚ್ಚೆ, ಅಸುರಕ್ಷಿತ ಅನೈತಿಕ ಲೈಂಗಿಕ ಕ್ರಿಯೆ, ವಿಷಕಾರಿ ವಸ್ತುಗಳು ಮತ್ತು ಕೆಲವು ಔಷಧಿಗಳು ವೈದ್ಯಕೀಯ ಪರಿಸ್ಥಿತಿಗಳು ಹೆಪಟೈಟಿಸ್‌ಗೆ ಕಾರಣ ಆಗುತ್ತದೆ.
• ಹೆಪಟೈಟಿಸ್ ವೈರಸ್ ನ ವಿಧಗಳು ಯಾವುವು?
ಹೆಪಟೈಟಿಸ್ ಎಂಬ ಪದವನ್ನು ಯಕೃತ್ತಿನ ಸೋಂಕನ್ನು ವಿವರಿಸಲು ಬಳಸಲಾಗುತ್ತದೆ .ಹೆಪಟೈಟಿಸ್‌ನಲ್ಲಿ ಐದು ವಿಧಗಳಿವೆ - ಎ, ಬಿ, ಸಿ, ಡಿ ಮತ್ತು ಇ. ಇವುಗಳಲ್ಲಿ, ಬಿ ಮತ್ತು ಸಿ ಅತ್ಯಂತ ಅಪಾಯಕಾರಿ ಮತ್ತು ದೀರ್ಘಕಾಲದ ಹೆಪಟೈಟಿಸ್ ಎಂದು ಹೇಳಲಾಗಿದೆ.
• ಹೆಪಟೈಟಿಸ್ / ಯಕೃತ್ತಿನ ಉರಿಯೂತ ಲಕ್ಷಣಗಳೇನು?
ಈ ವೈರಸ್ ಸೋಂಕಿಗೆ ಒಳಗಾದಾಗ ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳು ಕಂಡು ಬರದೇಇರಬಹುದು. ಕಣ್ಣುಗಳು ಮತ್ತು ಚರ್ಮದ ಹಳದಿ ಬಣ್ಣ, ಹಳದಿ ಮೂತ್ರ, ಹೊಟ್ಟೆ ನೋವು, ಹಸಿವಿನ ಕೊರತೆ, ಜ್ವರ, ವಾಕರಿಕೆ, ಸುಸ್ತು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲದ ಹೆಪಟೈಟಿಸ್ ಯಕೃತ್ತಿನ ಸಿರೋಸಿಸ್ , ಪಿತ್ತಜನಕಾಂಗದ ವೈಫಲ್ಯ ಮತ್ತು ಯಕೃತ್ತಿನ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಬಹುದು.
• ಹೆಪಟೈಟಿಸ್ / ಯಕೃತ್ತಿನ ಉರಿಯೂತ ಮತ್ತು ಆಯುರ್ವೇದದ ಪಾತ್ರವೇನು?
ಆಯುರ್ವೇದ ಎಂಬುವುದು ಕೇವಲ ಚಿಕಿತ್ಸಾಪದ್ದತಿ ಮಾತ್ರವಲ್ಲ್ದದೆ ಆದರ್ಶ ಜೀವನಶೈಲಿಯನ್ನು ವಿವಿಧ ಸ್ತರಗಳಲ್ಲಿ ಕ್ರಮಬದ್ಧವಾಗಿ ವಿವರಿಸಿದೆ. ರೋಗದ ಚಿಕಿತ್ಸೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ ಅಷ್ಟೇ ಗಮನವನ್ನು ರೋಗ ಬಾರದಂತೆ ನಿಯಂತ್ರಣದ ಬಗ್ಗೆಯೂ ವಿವರಿಸಿದೆ. ಯಕೃತ್ತಿನ ಉರಿಯೂತ ರೋಗಕ್ಕೆ ತುತ್ತಾದವರು ಆಯುರ್ವೇದದ ಮೂಲಕ ಸಂಪೂರ್ಣ ಗುಣಹೊಂದಬಹುದು ಅಥವಾ ರೋಗದ ಬೆಳವಣಿಗೆಯನ್ನು ತಡೆಗಟ್ಟಿ ಜೀವನದ ಗುಣಮಟ್ಟವನ್ನು ಎತ್ತರಿಸಿಕೊಳ್ಳಬಹುದು.
ಡಾ. ಧನೇಶ್ವರಿ ಎಚ್. ಎ
ಸಹಾಯಕ ಪ್ರಾಧ್ಯಾಪಕಿ
ಕಾಯಚಿಕಿತ್ಸಾ ಮತ್ತು ಮಾನಸರೋಗ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಉಡುಪಿ